

ಉಳ್ಳಾಲ: ಗ್ರಾಮಚಾವಡಿ ಕೊಣಾಜೆ ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನದ ಅಂಗವಾಗಿ ಸಂಘದ ವ್ಯಾಪ್ತಿಗೆ ಒಳಪಟ್ಟ 5 ಗ್ರಾಮಗಳ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕರಿಗೆ ಗುರುಗಳ ಬಗ್ಗೆ ವಿವಿಧ ಸ್ಪರ್ಧೆಗಳು ಗ್ರಾಮಚಾವಡಿಯ ಸಂಘದ ಸಮುದಾಯಭವನದಲ್ಲಿ ಭಾನುವಾರ ನಡೆದವು.
ಸಂಘದ ಜತೆ ಕಾರ್ಯದರ್ಶಿ ಸುಜಾತಾ ಸುರೇಶ್ ಹರೇಕಳ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ರಾಜೀವ ಪೂಜಾರಿ ಬೆಲ್ಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕಿ ಚಂದ್ರಾವತಿ ಗಂಗಾಧರ ಪೂಜಾರಿ ಪಜೀರು, ಶಿಕ್ಷಕಿ ಅಕ್ಷತಾ ನಾಯಕ್, ಯುವವಾಹಿನಿ ಗ್ರಾಮ ಚಾವಡಿ ಕೊಣಾಜೆ ಘಟಕದ ಅಧ್ಯಕ್ಷ ಬಾಬು ಬಂಗೇರ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಂತಿ ಪಾವೂರು, ಮಂದಿರದ ಅರ್ಚಕ ಜನಾರ್ದನ ಪೂಜಾರಿ ಪಜೀರು ಮುಖ್ಯ ಅತಿಥಿಗಳಾಗಿದ್ದರು. ಸಂಘದ ಉಪಾಧ್ಯಕ್ಷ ಸುಭಾಷ್ ಧರ್ಮ ನಗರ, ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಸಾಲಿಯಾನ್ ಬೊಲ್ಲೂರು, ರವೀಂದ್ರ ಬಂಗೇರ ಕೊಣಾಜೆ, ಚಂದ್ರಹಾಸ್ ಅಮೀನ್ ಹರೇಕಳ, ಪುರುಷೋತ್ತಮ್ ಬಂಗೇರ ಕೊಣಾಜೆ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸೌಮ್ಯ ಮನೋಜ್ ಪಜೀರು ಸ್ವಾಗತಿಸಿದರು. ಪೂರ್ಣಿಮಾ ಪಜೀರು ಕಾರ್ಯಕ್ರಮ ನಿರೂಪಿಸಿದರು.